Рет қаралды 21,179
ಒಂದೆಡೆ ಬುಟ್ಟಿಗಳಲ್ಲಿ ಮಾರಾಟಕ್ಕೆ ಇಟ್ಟಿರುವ ಬಗೆ ಬಗೆಯ ಒಣ ಮೀನುಗಳು, ಮತ್ತೊಂದೆಡೆ ಗ್ರಾಹಕರನ್ನ ತಮ್ಮತ್ತ ಸೆಳೆಯುವಲ್ಲಿ ಕಸರತ್ತು ಮಾಡುತ್ತಿರುವ ಮೀನುಗಾರ ಮಹಿಳೆಯರು. ಇನ್ನೊಂದೆಡೆ ಅಗತ್ಯವಿರುವಷ್ಟು ಒಣ ಮೀನು ಖರೀದಿಯಲ್ಲಿ ಮಗ್ನರಾಗಿರುವ ಗ್ರಾಹಕರು. ಈ ದೃಶ್ಯಗಳು ಕಂಡುಬಂದಿದ್ದು ಕರಾವಳಿ ಜಿಲ್ಲೆ ಉತ್ತರ ಕನ್ನಡದ ಕಾರವಾರದಲ್ಲಿ.
ಇನ್ನೇನು ಮಳೆಗಾಲ ಪ್ರಾರಂಭಕ್ಕೆ ಕೆಲವೇ ದಿನಗಳು ಉಳಿದಿದೆ. ಮೀನುಗಾರಿಕೆ ಅವಧಿ ಕೂಡ ಮುಕ್ತಾಯಗೊಂಡಿದೆ. ಸದ್ಯ ಮಾರುಕಟ್ಟೆಯಲ್ಲಿ ಹಸಿ ಮೀನು ಕಡಿಮೆಯಾಗಿರುವುದರಿಂದ ಒಣಮೀನಿಗೆ ಬೇಡಿಕೆ ಹೆಚ್ಚಾಗಿದೆ. ಹೀಗಾಗಿ ಕಾರವಾರದ ಮಾರುಕಟ್ಟೆಯಲ್ಲಿ ಒಣಮೀನಿನ ವ್ಯಾಪಾರ ಚುರುಕು ಪಡೆದುಕೊಂಡಿದೆ. ಕಾರವಾರದ ಒಣ ಮೀನಿಗೆ ಜಿಲ್ಲೆ ಮಾತ್ರವಲ್ಲದೇ ಹೊರ ಜಿಲ್ಲೆಗಳಲ್ಲೂ ಸಾಕಷ್ಟು ಬೇಡಿಕೆ ಇದೆ.
ಮಳೆಗಾಲ ಪ್ರಾರಂಭಕ್ಕೂ ಮುನ್ನ ನಗರದ ಭಾನುವಾರದ ಮಾರುಕಟ್ಟೆಯಲ್ಲಿ ಸಿಗುವ ಒಣಮೀನು ಖರೀದಿಗೆ ಜನರು ಮುಗಿಬೀಳುತ್ತಾರೆ. ಅದರಲ್ಲೂ ಕಾರವಾರದಲ್ಲಿ ಸಿಗುವ ಒಣಮೀನು ಉತ್ತಮ ಗುಣಮಟ್ಟದ್ದಾಗಿರುವ ಜೊತೆಗೆ ಬೆಲೆ ಸಹ ಕಡಿಮೆಯಿರುತ್ತದೆ. ಹೀಗಾಗಿ ಕೇವಲ ಕಾರವಾರಿಗರಲ್ಲದೇ ಮುಂಬೈ, ಬೆಂಗಳೂರು, ಪುಣೆ, ಗೋವಾದಿಂದ ಸಹ ಗ್ರಾಹಕರು ಆಗಮಿಸಿ ಒಣ ಮೀನನ್ನ ತೆಗೆದುಕೊಂಡು ಹೋಗುತ್ತಿದ್ದಾರೆ.
ಸದ್ಯ ಯಾಂತ್ರಿಕ ಮೀನುಗಾರಿಕೆ ಬಂದ್ ಆಗಿರುವುದರಿಂದ ಹಸಿ ಮೀನು ಲಭ್ಯತೆ ಕಡಿಮೆಯಿದೆ. ಹೀಗಾಗಿ ಒಣಮೀನು ಸುಮಾರು 6 ತಿಂಗಳಿನಿಂದ ವರ್ಷದವರೆಗೆ ಬಾಳಿಕೆ ಬರೋದ್ರಿಂದ ಜನರು ತಿಂಗಳುಗಟ್ಟಲೇ ಆಗುವಷ್ಟು ಒಣ ಮೀನನ್ನು ಇದೀಗ ಖರೀದಿ ಮಾಡುತ್ತಿದ್ದಾರೆ. ಇದಲ್ಲದೇ ಮಳೆಗಾಲದಲ್ಲಿ ತರಕಾರಿ ಬೆಲೆ ಸಹ ಗಗನಕ್ಕೇರುವುದರಿಂದ ಒಣಮೀನು ಬಳಕೆಗೆ ಉಪಯೋಗವಾಗುತ್ತದೆ.
ಪ್ರತಿ ವರ್ಷ ಮೇ ಅಂತ್ಯ ಹಾಗೂ ಜೂನ್ ಪ್ರಾರಂಭದಲ್ಲಿ ಕಾರವಾರ ಮಾರುಕಟ್ಟೆಯಲ್ಲಿ ಒಣಮೀನು ಮಾರಾಟ ಜೋರಾಗಿರುತ್ತದೆ. ಲಕ್ಷಾಂತರ ರೂಪಾಯಿ ಒಣಮೀನಿನ ವ್ಯವಹಾರ ಮಾರುಕಟ್ಟೆಯಲ್ಲಿ ನಡೆಯುತ್ತದೆ. ಕಾರವಾರ ಸುತ್ತಮುತ್ತಲಿನ ನೂರಾರು ಮಹಿಳೆಯರು ಒಣಮೀನಿನ ಮಾರಾಟದಲ್ಲಿ ತೊಡಗುತ್ತಾರೆ. ಕೇವಲ ಮಳೆಗಾಲ ಪ್ರಾರಂಭವಾಗುವ ಮುನ್ನ ಮಾತ್ರ ಒಣಮೀನು ಹೆಚ್ಚು ವ್ಯಾಪಾರವಾಗಲಿದ್ದು, ಮಳೆ ಪ್ರಾರಂಭವಾದರೆ ಮಾರುಕಟ್ಟೆಯಲ್ಲಿ ವ್ಯಾಪಾರ ಕಡಿಮೆಯಾಗುತ್ತದೆ ಎನ್ನುತ್ತಾರೆ.
ಒಟ್ಟಿನಲ್ಲಿ ಮಾರುಕಟ್ಟೆಯಲ್ಲಿ ಹಸಿಮೀನು ಕಡಿಮೆಯಾಗುತ್ತಿರುವಂತೆ ಮಳೆಗಾಲದ ಸಂಗ್ರಹಕ್ಕಾಗಿ ಜನರು ಒಣಮೀನಿನತ್ತ ಮುಖ ಮಾಡಿದ್ದು, ದರ ಕೊಂಚ ಹೆಚ್ಚು ಕಡಿಮೆಯಾದರೂ ಒಣಮೀನಿನ ವ್ಯಾಪಾರ ಜೋರಾಗಿರೋದು ವ್ಯಾಪಾರಸ್ಥರ ಮುಖದಲ್ಲಿ ಮಂದಹಾಸ ಮೂಡಿಸಿದ್ದಂತೂ ಸತ್ಯ.
Demand Raise For Dry Fish In Uttara Kannada District
#karwar #dryfish #fish
Our Website : Vijaykarnataka...
Facebook: / vijaykarnataka
Twitter: / vijaykarnataka