Рет қаралды 23,730
ಧಾರವಾಡದಲ್ಲಿ ಮಳೆಗಾಲ ಕವಿತೆಯ ಆಶಯ:-
ಚನ್ನವೀರ ಕಣವಿ ಅವರ ಕಾವ್ಯದಲ್ಲಿ ಮಳೆ ಹೆಚ್ಚು! ಅವರ ಕಾವ್ಯದಲ್ಲಿ ಮಳೆ ಸೋನೆಯಾಗಿ, ಹಸಿರಿಗೆ ಇಂಬಾಗಿ, ಪ್ರಕೃತಿಯ ಶ್ರುತಿಯಾಗಿ ಬರುವಂಥದ್ದು. ಕವಿ ಬೇಂದ್ರೆ ಶ್ರಾವಣದ ಗುಂಗು ಹಿಡಿಸಿದವರು. ಪ್ರಾಯಶಃ ಧಾರವಾಡದ ಮಳೆಗೆ ಇಂತಹ ಕಾವ್ಯವನ್ನು ನೀಡುವ ಶಕ್ತಿ ಇದ್ದಿರಬೇಕು. ಅದಕ್ಕೆ ಸಾಕ್ಷಿಯಾಗಿ ಈ ಪದ್ಯ 'ಧಾರವಾಡದಲ್ಲಿ ಮಳೆ', ಮಳೆ ಎಂಬುದೇ ಪ್ರಕೃತಿಯ ವಿಸ್ಮಯ, ಅಲ್ಲದೆ ಜೀವಕಾರಕ ಶಕ್ತಿಯೂ ಹೌದು. ವರ್ಷಋತು ಬಂದಾಗ ಪ್ರಕೃತಿ ಅದಕ್ಕೆ ಸ್ಪಂದಿಸುವುದನ್ನು ಕಾಣುವುದೇ ಒಂದು ಸೊಗಸು. ಅದನ್ನು ಇಲ್ಲಿ ಕವಿ ತಮ್ಮ ನುಡಿಚಿತ್ರಗಳ ಮೂಲಕ ಕಟ್ಟಿಕೊಟ್ಟಿದ್ದಾರೆ. 'ಗೌರಿಹುಣ್ಣಿವೆ ಹಾಲ್ಕುಡಿದು ಬಿಳಿಜೋಳ ಧ್ವಜವನ್ನೆತ್ತಿತು' ಎನ್ನುವಂತಹ ಕಾವ್ಯಾತ್ಮಕ ಸಾಲುಗಳೇ ಇಡೀ ಪದ್ಯದ ತುಂಬ ತುಂಬಿವೆ. ಹೀಗೆ ಪ್ರಕೃತಿಗೆ ಒಲಿದ ಮಳೆ ಜನರಿಗೆ ತಾಗುವ ರೀತಿಯನ್ನೂ ಸಹ ಕವಿತೆ ಬಣ್ಣಿಸುತ್ತದೆ. 'ಬೂಟು ಚಪ್ಪಲು ಮಾಡದಲ್ಲಿಯೆ ಬುರುಸುಗಟ್ಟಿದೆ ಥಂಡಿಗೆ' ಎನ್ನುವ ಸಾಲು ಇದಕ್ಕೆ ಉದಾಹರಣೆ. ಹೀಗೆ ಮಳೆ ಕೆಲಸವನ್ನೆಲ್ಲ ನುಡಿಚಿತ್ರಗಳ ಮೂಲಕ ಹಿಡಿಯುವುದು ಈ ಕವಿತೆಯ ವೈಶಿಷ್ಟ್ಯ ಸಾಮಾನ್ಯವಾಗಿ ಮಳೆಯನ್ನೇ ಧ್ಯಾನಿಸಿ ಹೆಚ್ಚು ಕವಿತೆಗಳನ್ನು ಬರೆದ ಕವಿ ಎಂದರೆ ಕಣವಿಯವರೇ ಎಂಬ ಮಾತಿದೆ. ಅದಕ್ಕೆ ಪೂರಕವಾಗಿ ಎಂಬಂತೆ ಈ ಕವಿತೆ ಮಳೆಯ 'ಸಂಗಾತವನ್ನು ಬಿಚ್ಚಿಡುತ್ತದೆ. ಮಹತ್ವಾಕಾಂಕ್ಷೆಯ ಪದ್ಯ ಎಂದೆನಿಸದಿದ್ದರೂ ಈ ಪದ್ಯವು ಮಳೆಯ ಬರವನ್ನು ಚಿತ್ರಿಸುವ ಉತ್ತಮ ಪದ್ಯವಾಗಿದೆ ಎನ್ನಬಹುದು.