Рет қаралды 132
ಯಳಂದೂರು:ಸರ್ಕಾರಿ ನೌಕರರು ಸಾರ್ವಜನಿಕರ ಕೆಲಸವನ್ನು, ರೈತರ ಕೆಲಸವನ್ನು ಮಾಡಿಕೊಡಲು ವಿನಾಕಾರಣ ಅಲೆಸಬಾರದು ಎಂದು ಶಾಸಕ ಎ.ಆರ್. ಕೃಷ್ಣಮೂರ್ತಿ ಕಿವಿಮಾತು ಹೇಳಿದರು.
ಅವರು ಪಟ್ಟಣದ ಸರ್ಕಾರಿ ನೌಕರರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ದಿನದಿರ್ಶಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಸರ್ಕಾರಿ ನೌಕರರಿಗೆ 7 ನೇ ವೇತನವನ್ನು ಬಿಡುಗಡೆ ನಮ್ಮ ಸರ್ಕಾರ ಮಾಡಿದೆ. ಓಪಿಎಸ್ ಪಿಂಚಣಿಯನ್ನು ಮತ್ತೆ ಜಾರಿಗೆ ತರುವಂತೆ ಮನವಿ ಸಲ್ಲಿಸಿದ್ದು ಇದಕ್ಕೆ ನಾನು ಕೂಡ ಕೈ ಜೋಡಿಸುತ್ತೇನೆ. ಪಟ್ಟಣದಲ್ಲಿ ಸರ್ಕಾರಿ ನೌಕರರ ಭವನ ನಿರ್ಮಾಣಕ್ಕೆ ಇರುವ ಕೆಲವು ತಾಂತ್ರಿಕ ತೊಡಕುಗಳನ್ನು ನಿವಾರಿಸಿ ಇದರ ನಿರ್ಮಾಣಕ್ಕೆ ಕ್ರಮ ವಹಿಸಲಾಗುವುದು. ಇದರೊಂದಿಗೆ ಸರ್ಕಾರಿ ನೌಕರರ ವಸತಿಗೃಹ ನಿರ್ಮಾಣಕ್ಕೂ ಆದ್ಯತೆ ನೀಡಲಾಗುವುದು. ಯಳಂದೂರು ಪಟ್ಟಣದ ವ್ಯಾಪ್ತಿಗೆ ಹಲವು ಸರ್ವೇ ಜಮೀನುಗಳನ್ನು ಸೇರಿಸಿಕೊಳ್ಳಲು ಆ ಮೂಲಕ ಪಟ್ಟಣದ ವ್ಯಾಪ್ತಿಯನ್ನು ವಿಸ್ತರಿಸಲು ಕ್ರಮ ವಹಿಸಲಾಗಿದೆ. ಇದರಿಂದ ಪಟ್ಟಣದ ನಿವೇಶನಗಳಿಗೆ ಹೆಚ್ಚು ಬೆಲೆ ಬರಲಿದೆ.
ಸಂಪುಟ ಸಭೆಯಲ್ಲಿ ನೀರಾವರಿ ಯೋಜನೆಗೆ ಮನವಿ: ಜಿಲ್ಲೆಯಲ್ಲಿ ಕಬಿನಿ 2 ನೇ ಹಂತದ
ಯೋಜನೆ ರಾಮಕೃಷ್ಣ ಹೆಗಡೆರವರ ಕಾಲದಲ್ಲಿ ಜಾರಿಗೆ ಬರುವ ಸಮಯದಲ್ಲಿ ಅನಿವಾರ್ಯವಾಗಿ ರದ್ದುಗೊಂಡಿತು. ಈಗ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಪ್ರಗತಿಯಲ್ಲಿದೆ. ಜಿಲ್ಲೆಯ ನೀರಾವರಿ ಯೋಜನೆ ಜಾರಿಗೆ 500 ಕೋಟಿ ರೂ. ಅಂದಾಜು ಅನುದಾನ ಬೇಕಿದ್ದು ಈ ಬಗ್ಗೆ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳಿಗೆ ಜಿಲ್ಲೆಯ ಮಲೆಮಹದೇಶ್ವರ ಬೆಟ್ಟದಲ್ಲಿ ನಡೆಯುವ ಸಚಿವ ಸಂಪುಟದ ಸಭೆಯಲ್ಲಿ ಮನವಿ ಸಲ್ಲಿಸಲಾಗುವುದು. ಇದರಿಂದ ಕೆರೆಕಟ್ಟೆಗಳು, ಕಾಲುವೆ, ನಾಲೆಗಳ ಅಭಿವೃದ್ಧಿಯಾದಾಗ ರೈತರಿಗೆ ಅನುಕೂಲವಾಗಲಿದೆ. ಇದರೊಂದಿಗೆ ಕ್ಷೇತ್ರ ವ್ಯಾಪ್ತಿಯಲ್ಲಿ 440 ಕವಿಎ ವಿದ್ಯುತ್ ಸ್ಟೇಷನ್ ನಿರ್ಮಾಣಕ್ಕೆ 40 ಎಕರೆ ಪ್ರದೇಶ ಬೇಕಿದ್ದು ಈಗಾಗಲೇ ಇದನ್ನು ಗುರುತಿಸುವಂತೆ ನಾನು ಮನವಿ ಮಾಡಿದ್ದೇನೆ. ಅಲ್ಲದೆ 60 ಎಕರೆ ಪ್ರದೇಶದಲ್ಲಿ ಸೋಲಾರ್ ಪ್ಯಾನಲ್ ಅಳವಡಿಕೆಗೆ ಸ್ಥಳ ಬೇಕಿದ್ದು ಸರ್ಕಾರಿ ಜಾಗವನ್ನು ಗುರುತಿಸುವಂತೆ ಮನವಿ ಮಾಡಿದ್ದು, ಮಲಾರಪಾಳ್ಯ ಗ್ರಾಮದ ಬಳಿ ಈಗಾಗಲೇ 11.20 ಎಕರೆ ಪ್ರದೇಶವನ್ನು ಗುರುತಿಸಲಾಗಿದೆ. ಮೆಳ್ಳಹಳ್ಳಿ ಗೇಟ್‌ಬಳಿ ಅಗ್ನಿಶಾಮಕ ಠಾಣೆಯನ್ನು ನಿರ್ಮಿಸಲು 2 ಎಕರೆ ಜಮೀನನ್ನು ಗುರುತಿಸಲಾಗಿದ್ದು ಇದಕ್ಕೆ ಶೀಘ್ರದಲ್ಲೇ ಭೂಮಿಪೂಜೆ ನೆರವೇರಿಸಲಾಗುವುದು ಎಂದರು.
ಸರ್ಕಾರಿ ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯ ವೈ.ಎಂ. ಮಂಜುನಾಥ್, ತಾಲೂಕು ಅಧ್ಯಕ್ಷ ಅಮ್ಮನಪುರ ಮಹೇಶ್, ಜಿಲ್ಲಾಧ್ಯಕ್ಷ ಡಾ. ರೇಣುಕಾದೇವಿ, ಜಿಲ್ಲಾ ಗ್ಯಾರಂಟಿ ಯೋಜನೆ
ಪ್ರತಿಷ್ಠಾನ ಸಮಿತಿ ಅಧ್ಯಕ್ಷ ಎಚ್.ವಿ. ಚಂದ್ರು, ತಹಶೀಲ್ದಾರ್ ಜಯಪ್ರಕಾಶ್, ಉಪ ಪ್ರಾಂಶುಪಾಲ ನಂಜುಂಡಯ್ಯ ಮಾತನಾಡಿದರು. ಬಿಇಒ ಮಾರಯ್ಯ, ತಾಪಂ ಸಹಯಕ ನಿರ್ದೇಶಕ ರವೀಂದ್ರ, ಮುಖ್ಯಾಧಿಕಾರಿ ಎಂ.ಪಿ. ಮಹೇಶ್‌ಕುಮಾರ್, ಪಪಂ ನಾಮ ನಿರ್ದೇಶಿತ ಸದಸ್ಯ ಲಿಂಗರಾಜಮೂರ್ತಿ, ಡಾ. ಶ್ರೀಧರ್ ಸಂಘದ ಗೌರವಾಧ್ಯಕ್ಷ ಯದುಗಿರಿ. ಕಾರ್ಯಾಧ್ಯಕ್ಷ ನದೀಂಷರೀಪ್, ಕಾರ್ಯದರ್ಶಿ ರವಿಕುಮಾರ್, ಖಜಾಂಚಿ ಜಗದೀಶ್, ನಿರ್ದೇಶಕರಾದ ನವೀನ್, ಮಹೇಶ್, ಬಸವರಾಜು, ಧರ್ಮೇಂದ್ರ, ಆರ್. ಕೊಳಂದ ವೇಲು, ಮಾನಸ. ಕೀರ್ತಿಪ್ರಸಾದ್, ನಂದ, ಎಸ್. ಮಹೇಶ್, ಬಸವರಾಜೇಂದ್ರಪ್ರಭು, ಶಶಿಕಲಾ, ಸಂಪಿಗಯ್ಯ, ಮಹದೇವಸ್ವಾಮಿ, ಸೈಯದ್ ಉವೇಸ್ ಅಹಮ್ಮದ್, ಮಮತ, ಗಿರೀಶ್, ಪುಟ್ಟಸಿದ್ದಮ್ಮ. ಬಿಸಲಯ್ಯ ಸೇರಿದಂತೆ ಅನೇಕರು ಇದ್ದರು.